ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಾಲ್ನಾಡ್ ತಾಲ್ಲೂಕಿನಲ್ಲಿರುವ, ಬೌದ್ಧಸ್ತೂಪದ ಅವಶೇಷಗಳುಳ್ಳ ಪ್ರಸಿದ್ಧ ಗ್ರಾಮ. ಕೃಷ್ಣಾನದಿಯ ಗೊಲ್ಲಾರು ಎಂಬ ನದಿಯ ದಡದ ಮೇಲಿದೆ. 1822ರಲ್ಲಿ ರಾಬರ್ಟ್ ಸಿವೆಲ್ ಇಲ್ಲಿದ್ದ ಬೌದ್ಧಸ್ತೂಪವನ್ನು ಪತ್ತೆಹಚ್ಚಿದ. 1926ರಲ್ಲಿ ಪ್ರಸಿದ್ಧ ಚರಿತ್ರಕಾರ ಜಿ.ಜೆ. ಡೂಬ್ರೆ ಈ ಸ್ತೂಪವನ್ನು ಅಗೆಸಿ ಇದರಲ್ಲಿದ್ದ ಶಿಲ್ಪ ಫಲಕಗಳನ್ನೆಲ್ಲ ಮದ್ರಾಸ್ ಸರ್ಕಾರದ ವಸ್ತುಸಂಗ್ರಹಾಲಯಕ್ಕೆ ವರ್ಗಾಯಿಸಿದ. ಇಂದಿಗೂ ಇವು ಅಲ್ಲಿ ಪ್ರದರ್ಶಿತವಾಗಿವೆ. ಗೋಲಿಯ ಸ್ತೂಪ ಪೂರ್ತಿಯಾಗಿ ನಷ್ಟವಾಗಿದೆ. ಈಗ ಉಳಿದಿರುವುದು ಆ ಸ್ತೂಪವನ್ನಲಂಕರಿಸಿದ್ದ ಶಿಲ್ಪಗಳು ಮಾತ್ರ. ಇವು ಆಂಧ್ರದ ಆ ಕಾಲದ ಇತರ ಶಿಲ್ಪಗಳಂತೆ ಬಿಳಿಯ ಸುಣ್ಣಕಲ್ಲಿನಿಂದ ಮಾಡಿದವು. ಅಮರಾವತಿ ಶಿಲ್ಪಶೈಲಿಯ ಕೊನೆಯ, ಎಂದರೆ ನಾಲ್ಕನೆಯ, ಹಂತಕ್ಕೆ ಗೋಲಿಯ ಶಿಲ್ಪಗಳು ಸೇರುತ್ತವೆಂಬುದು ವಿದ್ವಾಂಸರ ಮತ. 3ನೆಯ ಶತಮಾನದ ಹೊತ್ತಿಗೆ ಈ ಶಿಲ್ಪಗಳು ನಿರ್ಮಾಣವಾಗಿದ್ದಿರ ಬೇಕೆಂದು ತಿಳಿದುಬರುತ್ತದೆ.

ಇಲ್ಲಿಯ ಶಿಲ್ಪ ಫಲಕಗಳಲ್ಲಿ ವೆಸ್ಸಂತರ ಜಾತಕ, ಷಡ್ಡಂತಜಾತಕ, ನಳಗಿರಿ ಎಂಬ ಮದಿಸಿದ ಆನೆಯ ಸೊಕ್ಕನ್ನು ಬುದ್ಧ ಮುರಿದು ಸಾಧುವಾಗಿ ಮಾಡುತ್ತಿರುವ ದೃಶ್ಯ, ಯಶೋಧರೆಯನ್ನು ಸಂಧಿಸುತ್ತಿರುವುದು, ಸುಜಾತೆ ಬೋಧಿಸತ್ತ್ವನಿಗೆ ಆಹಾರ ಕೊಡುತ್ತಿರುವುದು, ಬುದ್ಧನ ಧರ್ಮಬೋಧೆ ಮುಂತಾದವು ಬಹು ಮುಖ್ಯವಾದವು. ಅಮರಾವತಿಯ ಶಿಲ್ಪಿಗಳೇ ಇವನ್ನೂ ಕೆತ್ತಿದರೋ ಎನ್ನುವ ಸಂದೇಹ ಬರುವಷ್ಟು ಮಟ್ಟಿಗೆ ಇವು ಅಲ್ಲಿಯ ಶಿಲ್ಪಗಳನ್ನು ಹೋಲುತ್ತವೆ. ಬೌದ್ಧಸ್ತೂಪವೊಂದಕ್ಕೆ ಸ್ತ್ರೀಯರು ನಮಸ್ಕರಿಸುತ್ತಿರುವ ಶಿಲ್ಪ ಬಹು ರಮ್ಯವಾಗಿದೆ. ಇಲ್ಲಿ ದೊರಕಿರುವ ಚೈತ್ಯಫಲಕದಲ್ಲಿ ಐದು ಆಯಕ ಸ್ತಂಭಗಳು ಮತ್ತು ಅಲಂಕಾರಗಳು ಕಾಣಬರುತ್ತವೆ. ಇದರ ಆಧಾರದ ಮೇಲೆ ಊಹಿಸುವುದಾದರೆ ಗೋಲಿಯ ಸ್ತೂಪವೂ ಆಯಕ ಸ್ತಂಭಗಳನ್ನೊಳಗೊಂಡು ಅಲಂಕಾರಯುತವಾಗಿದ್ದಿರಬೇಕೆಂದು ಹೇಳಬಹುದು. ಶಿಲ್ಪ ಫಲಕಗಳಲ್ಲಿ ವಿಶೇಷವಾಗಿ ಆಕರ್ಷಿಸುವುದೆಂದರೆ ಅವುಗಳಲ್ಲಿಯ ಪ್ರಾಣಿಗಳ ಚಿತ್ರಗಳು. ಹಸು, ಕುದುರೆ, ಆನೆ, ಮೊಲ, ಹಂಸ, ಎತ್ತು ಮುಂತಾದ ಪ್ರಾಣಿಗಳು ಚೆನ್ನಾಗಿ ಶಿಲ್ಪಿತವಾಗಿವೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ